ಬದುಕು ಕೃಷ್ಣಾರ್ಪಣಗೊಳ್ಳಲಿ.
ಬದುಕನ್ನು ಮುಗಿಸುವ ವಸ್ತುಗಳನ್ನೇ ವೈದ್ಯನಾದವ ಔಷಧಿಯನ್ನಾಗಿ ಪರಿವರ್ತಿಸಿ ರೋಗಗಳಿಂದ ಮುಕ್ತರನ್ನಾಗಿ ಮಾಡಿ ಬದುಕು ಉಳಿಸುವನು. ಅದೇ ರೀತಿ ನಾವು ಆಚರಿಸುವ ಕರ್ಮವೂ ಕೂಡ. ಬರಿಯ ಕರ್ಮವೆನ್ನುವುದು ನಮ್ಮನ್ನು ಮುಳುಗಿಸುವ ಸಲುವಾಗಿಯೇ ಇರುವುದು. ಅದು ಒಂದು ಬಗೆಯ ರೋಗ. ಅದನ್ನು ಭಗವಂತನಿಗೊಪ್ಪಿಸಿದಾಗ(ಕೃಷ್ಣಾರ್ಪಣ ಬುದ್ಧಿ ಇದ್ದಾಗ)ಅದೇ ಕರ್ಮವು ನಮ್ಮನ್ನು ಸಂಸರಣದಿಂದ ಪಾರು ಮಾಡುವುದು.
ಆಮಯೋಽಯಂ ಚ ಭೂತಾನಾಂ ಜಾಯತೇ ಯೇನ ಸುವ್ರತ
ತದೇವ ಹ್ಯಾಮಯದ್ರವ್ಯಂ ತತ್ ಪುನಾತಿ ಚಿಕಿತ್ಸಿತಂ |
ಏವಂ ನೃಣಾಂ ಕ್ರಿಯಾಯೋಗಾಃ ಸರ್ವೇ ಸಂಸೃತಿಹೇತವಃ
ತ ಏವಾತ್ಮವಿನಾಶಾಯ ಕಲ್ಪಂತೇ ಕಲ್ಪಿತಾಃ ಪರೇ ||
– ಭಾಗವತ-ಪ್ರಥಮಸ್ಕಂಧ
ಏಳುವ ಕ್ರಿಯೆಯಿಂದ ಹಿಡಿದು ಮಲಗುವ ತನಕದ ಪ್ರತಿಯೊಂದನ್ನೂ ಆದಷ್ಟು ಭಗವದೆಚ್ಚರದಿಂದ ಆಚರಿಸುವಿಕೆಯೇ ಕೃಷ್ಣಾರ್ಪಣ ಬುದ್ಧಿಯು. ಎಷ್ಟೋ ಜನರಿಗೊಂದು ಪ್ರಬಲವಾದ ಭ್ರಮೆ ಇದೆ. ಅದೇನೆಂದರೆ ವಿಷ್ಣುವಿಗೆ ಸಂಬಂಧಿಸಿದ ಕರ್ಮವನ್ನು ಮಾತ್ರವೇ ಕೃಷ್ಣನಿಗೆ ಒಪ್ಪಿಸುವುದು. ಉಳಿದ ದೇವತೆಗಳ ಆರಾಧನೆಯನ್ನು ಆಯಾ ದೇವತೆಗಳಿಗೆ ಅರ್ಪಿಸಬೇಕೆನ್ನುವುದಾಗಿ. ಈ ಬಗೆಯ ಚಿಂತನೆಯು ಭಾಗವತ ವಿರೋಧಿಯಾಗಿದೆ. ಶಾಸ್ತ್ರವಿರುದ್ಧವಾಗಿದೆ. ನೀನೇನೇನು ಮಾಡುತ್ತಿಯೋ ಅದನ್ನೆಲ್ಲವನ್ನೂ ನನಗೊಪ್ಪಿಸು ಎನ್ನುವುದು ಭಾರತೀಯರೇ ಒಪ್ಪಿಕೊಂಡ, ಸನಾತನ ಎನಿಸಿದ ಗೀತೆಯಲ್ಲಿನ ಕೃಷ್ಣನ ನುಡಿಯಾಗಿದೆ. “ಯತ್ಕರೋಷಿ…ತತ್ಕುರುಷ್ವ ಮದರ್ಪಣಂ”
ಕರ್ಮ ಎನ್ನುವುದು ದೇವರ ಎಚ್ಚರದಲ್ಲಿ ಅರ್ಥಾತ್ ಜ್ಞಾನದಲ್ಲಿ ಕೊನೆಗೊಳ್ಳಬೇಕು. ಕರ್ಮವು ಕರ್ಮದಲ್ಲೇ ಪರ್ಯವಸಾನಗೊಂಡರೆ ಅದು ಅಪಾಯಕಾರಿ. ಇದು ವೇದವಿಭಜಿಸಿದ ವ್ಯಾಸರ ಅಭಿಪ್ರಾಯ. ಹಾಗಾಗಿ ಕೊನೆಯ ಪಕ್ಷ ಮಲಗುವ, ಏಳುವ ಹೊತ್ತಿನಲ್ಲಾದರೂ ಜ್ಞಾನ ನಿಧಿಯೆನಿಸಿ, ಜ್ಞಾನಮೂರುತಿಯಾದ ಕೃಷ್ಣನ ನೆನಪಾಗಲಿ. ಬದುಕು ಕೃಷ್ಣಾರ್ಪಣಗೊಳ್ಳಲಿ.